ಅಸ್ಥಿಪಂಜರ / ಅಸ್ತಿಪಂಜರ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
ಅರ್ಥ: ಮೂಳೆಯ ಅಥವಾ ಎಲುಬಿನ ಗೂಡು
English: Asthipanjara / Astipanjara (Kannada) = Skeleton
हिंदी: अस्थिपंजर / अस्तिपंजर (कन्नड) = अस्थिपंजर, कंकाल
संस्कृत: अस्थिपंजर / अस्तिपंजर (कन्नड) = अस्थिपञ्जर
ಅರ್ಥ
ನಾಮಪದ:
ಪ್ರಾಣಿಯ ಅಥವಾ ಮನುಷ್ಯನ ಮೂಳೆಯ ಗೂಡು, ಕಂಕಾಲ, ಎಲುಬಿನ ಗೂಡು
ಉತ್ಪತ್ತಿ
अस्थिपञ्जर = अस्थि + पञ्जर
ಅಸ್ಥಿಪಂಜರ ತತ್ಸಮ ಪದ ಆಗಿದ್ದರೆ ಅಸ್ತಿಪಂಜರ ತದ್ಭವ ಪದ ಆಗಿದೆ.
ಉಪಯೋಗ
ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಾನವನ ಅಸ್ಥಿಪಂಜರದ ಭಾಗಗಳ ಬಗ್ಗೆ ಕಲಿಯುತ್ತಾರೆ.
ಮೋರಿಯಲ್ಲಿ ತೇಲಿ ಬಂದ ಮಾನವನ ಅಸ್ತಿಪಂಜರ.
ಆ ನಿರ್ಜನ ಪ್ರದೇಶದಲ್ಲಿರುವ ಮನೆಯಲ್ಲಿ ನೂರಾರು ಅಸ್ಥಿಪಂಜರ ದೊರಕಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕಾಡಿನಲ್ಲಿ ಶವ ಬಿಸಾಕಿದ್ದ ಪತ್ತೆ ಆದಾಗ ಅಲ್ಲಿ ದೇಹ ಏನೂ ಉಳಿದಿರಲಿಲ್ಲ ಬರಿ ಅಸ್ಥಿಪಂಜರ ಮಾತ್ರ ಇತ್ತು.
ಉತ್ಖನನ ಮಾಡುವಾಗ ಸಿಕ್ಕಿದ ಡೈನೋಸಾರ್ ನ ಅಸ್ಥಿಪಂಜರದಿಂದ ಮಿಲಿಯನ್ ವರ್ಷಗಳ ಹಿಂದೆ ಅಲ್ಲಿ ಇತ್ತು ಎನ್ನುವದು ತಿಳಿಯಿತು.
ವಿವರ
ಅಸ್ಥಿ ಎಂದರೆ ಮೂಳೆ ಅಥವಾ ಎಲುಬು ಎಂದರ್ಥ. ಪಂಜರ ಎಂದರೆ ಪ್ರಾಣಿ, ಪಕ್ಷಿಗಳನ್ನು ಕೂಡಿ ಹಾಕಲು ಮರದ ಕೋಲಿನಿಂದ ಅಥವಾ ಲೋಹದ ಸರಳಿನಿಂದ ಮಾಡಲ್ಪಟ್ಟ ಗೂಡು.
ಅಸ್ಥಿಪಂಜರ ಎಂದರೆ ಪಶು, ಪಕ್ಷಿ, ಪ್ರಾಣಿಗಳಲ್ಲಿ ಅವುಗಳ ಆಕಾರ ಕೊಡಲು, ದೇಹದ ಅಂಗಾಂಗಗಳಿಗೆ ಸುರಕ್ಷತೆ ನೀಡಲು ಹಾಗೂ ಚಲನೆಗೆ ಅನುಕೂಲ ಮಾಡಿಕೊಡುವಂತೆ ದೇಹದ ಒಳಗೆ ಇರುವ ಎಲುಬಿನಿಂದ ಮಾಡಲ್ಪಟ್ಟ ಗೂಡು.
ಅಸ್ಥಿಪಂಜರದಲ್ಲಿ ತಲೆಬುರುಡೆ, ಎದೆಗೂಡು, ಕೈ, ಕಾಲಿನ ಮೂಳೆ, ಬೆನ್ನೆಲುಬು ಹೀಗೆ ಎಲ್ಲವೂ ಸೇರಿರುತ್ತದೆ. ಅಕಸ್ಮಾತ್ ಇವುಗಳಲ್ಲಿ ಯಾವುದೋ ಒಂದೇ ಭಾಗ ಉದ್ದೇಶಿಸಿ ಇದ್ದರೆ ಅದಕ್ಕೆ ಆಯಾ ಹೆಸರಲ್ಲೇ ಕರೆಯಲಾಗುತ್ತದೆ.
ಬೆನ್ನೆಲುಬು ಜೊತೆ ಅಸ್ಥಿಪಂಜರ ಇರುವ ಜೀವಿಗಳಿಗೆ ಕಶೇರುಕ ಎನ್ನುತ್ತಾರೆ. ಬೆನ್ನೆಲುಬು ಇರದಿದ್ದರೆ ಅಕಶೇರುಕ ಎನ್ನುತ್ತಾರೆ.
ಈ ಪದವನ್ನು ಕೆಲವೊಮ್ಮೆ ತುಂಬಾ ಸೊರಗಿ ಹೋಗಿರುವದಕ್ಕೆ ಹೋಲಿಕೆಯಾಗಿ ಬಳಸಲಾಗುತ್ತದೆ. ಈ ಕೆಳಗಿನ ಉದಾಹರಣೆಗಳಲ್ಲಿ ಹೋಲಿಕೆ ರೂಪದಲ್ಲಿ ಬಳಸಲಾಗಿದೆ. ಇದಕ್ಕೆ ಉಪಮಾಲಂಕಾರ ಎನ್ನುತ್ತಾರೆ.
ಉದಾಹರಣೆಗಳು:
- ಆತನನ್ನು ನೋಡಿದಾಗ ಅಸ್ಥಿಪಂಜರ ನೋಡಿದಂತೆ ಭಾಸ ಆಯಿತು.
- ಅವಳು ಸೊರಗಿ ಅಸ್ಥಿಪಂಜರದ ತರಹ ಆಗಿದ್ದಳು.
- ಆಹಾರ ಇಲ್ಲದೇ ಪ್ರಾಣಿಗಳ ಅಸ್ಥಿಪಂಜರ ಕಾಣಿಸುತ್ತಿತ್ತು.
ಈ ಮುಂದಿನ ರೀತಿ ಕೂಡಾ ಈ ಪದ ಬಳಸಬಹುದು. ಇಲ್ಲಿ ಸಾಯುತ್ತೀಯಾ ಎಂಬರ್ಥ ನೀಡುತ್ತೆ.
ಉದಾಹರಣೆ:
- ನನ್ನ ಸುದ್ದಿಗೆ ಬರಬೇಡ ನೀನು ಅಸ್ಥಿಪಂಜರ ಆಗಿಬಿಡ್ತೀಯ.
ಕಾಲಮಾನ
ಮೂಲ ಭಾಷೆ
ಸಂಸ್ಕೃತ
ಇದೇ ಅರ್ಥದ ಪದಗಳು
ಕಂಕಾಲ, ಎಲುಬಿನ ಗೂಡು, ಮೂಳೆ ಗೂಡು
ಏಕ ವಚನ / ಬಹು ವಚನ
ಅಸ್ಥಿಪಂಜರ ಇದು ಏಕವಚನ. ಕೇವಲ ಒಂದು ಅಸ್ಥಿಪಂಜರವನ್ನು ಉದ್ದೇಶಿಸಿ ಹೇಳಲ್ಪಡುವ ಪದ.
ಅಸ್ಥಿಪಂಜರಗಳು ಇದು ಬಹುವಚನ. ಒಂದಕ್ಕಿಂತ ಹೆಚ್ಚು ಎಲುಬಿನ ಗೂಡುಗಳಿಗೆ ಅಸ್ಥಿಪಂಜರಗಳು ಪದ ಬಳಸಬೇಕು.
ಸಂಬಂಧ ಪಟ್ಟ ಪದಗಳು
ಬೇರೆ ಭಾಷೆಗಳಲ್ಲಿ
Asthipanjara (Kannada) Meaning in English
Skeleton
अस्थिपंजर (कन्नड) - हिंदी में अर्थ
अस्थिपंजर, कंकाल
अस्थिपंजर (कन्नड) - संस्कृत अर्थ
ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.